Shree Mallikarjuna Gurudeva AshramSMG Ashram
ವೇದಾಂತ ಕೇಸರಿ ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಶಿವಯೋಗಿಗಳು ಗದುಗಿನ ಜಗದ್ಗುರು ಶ್ರೀ ಶಿವಾನಂದ ಮಹಾಸ್ವಾಮಿಗಳವರ ಶಿಷ್ಯತ್ವವನ್ನು ಪಡೆದು, ಸಕಲ ಶಾಸ್ತ್ರಗಳ ಅಧ್ಯಯನವನ್ನು ಗೈದು, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಗೋವಾದಂತಹ ರಾಜ್ಯಗಳಲ್ಲಿ ಕನ್ನಡ, ಹಿಂದಿ, ಮರಾಠಿಯಲ್ಲಿ ಪ್ರವಚನಗಳನ್ನು ಮಾಡಿ ಲಕ್ಷ ಲಕ್ಷ ಭಕ್ತರಿಗೆ ದೀಕ್ಷೆಯನ್ನು ನೀಡಿ ಧರ್ಮದ ದಾರಿಯಲ್ಲಿ ನಡೆಸಿದವರು. ಅಜ್ಞಾನವನ್ನು ತೊಲಗಿಸಿ ಜ್ಞಾನದ ಮಾತುಗಳನ್ನು ತಿಳಿಸಿದವರು. ಮಹಾರಾಷ್ಟ್ರದ ಮಿರಜದಲ್ಲಿ ಪ್ರಪ್ರಥಮವಾಗಿ ಕನ್ನಡ ಶಾಲೆಯನ್ನು ಪ್ರಾರಂಭಿಸಿದರು. ಅನೇಕ ಗ್ರಂಥಗಳನ್ನು ರಚಿಸಿದರು. ಶಾಲೆ, ಕಾಲೇಜುಗಳಿಗೆ, ವಿದ್ಯಾರ್ಥಿ ನಿಲಯಗಳಿಗೆ, ಆರ್ಥಿಕ ಸಂಸ್ಥೆಗಳಿಗೆ, ಧಾರ್ಮಿಕ ಕೇಂದ್ರಗಳಿಗೆ, ವ್ಯಸನ ಮುಕ್ತ ಕೇಂದ್ರಗಳಿಗೆ ಪ್ರೇರಕರಾದವರು.
ಅಲ್ಲಮರ ಜ್ಞಾನ, ಅಕ್ಕಮಹಾದೇವಿಯ ವೈರಾಗ್ಯ, ಶರಣರ ಸರಳ ಬದುಕು, ನಿಸ್ವಾರ್ಥ ಸೇವೆ ಮಾಡುತ್ತಾ ಚರಜಂಗಮರಾಗಿ ಎಲ್ಲಾ ಭಕ್ತರಲ್ಲಿ ಆಧ್ಯಾತ್ಮದ ಮೂಲ ವಿದ್ಯೆಯನ್ನು, ಇಷ್ಟಲಿಂಗ ಸಾಧನೆಯನ್ನು, ಅದ್ವೈತದ ಸಿದ್ಧಿಯನ್ನು, ಆದರ್ಶ ಶರಣಜೀವನವನ್ನು ಸಾಗಿಸುವಂತೆ ಬೋಧಿಸಿದ ಏಕೈಕ ಮಹಾಶಿವಯೋಗಿಗಳೆಂದರೆ ವೇದಾಂತ ಕೇಸರಿ ಮಲ್ಲಿಕಾರ್ಜುನ ಮಹಾಶಿವಯೋಗಿಗಳು.
ಇಂತಹ ಶ್ರೇಷ್ಠ ಯೋಗಿಗಳ ಸ್ಮರಣೆಗಾಗಿ ಅವರ ಪರಮಶಿಷ್ಯರಾದ ಜ್ಞಾನಯೋಗಿ ಪೂಜ್ಯಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರು ಶಿಲಾಮಂದಿರವನ್ನು ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದಲ್ಲಿರುವ ಗುರುದೇವ ಆಶ್ರಮದಲ್ಲಿ ನಿರ್ಮಿಸಬೇಕೆಂದು ಎಲ್ಲ ಶಿಷ್ಯರಿಗೆ, ಸದ್ಭಕ್ತರಿಗೆ ತಿಳಿಸಿದರು. ಗುರುದೇವರ ಆದೇಶವನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಪೂಜ್ಯ ಸಿದ್ದೇಶ್ವರ ಅಪ್ಪಗಳವರ ಸಂಕಲ್ಪದಂತೆ ಮಂದಿರವನ್ನು ನಿರ್ಮಿಸುತ್ತಲಿದ್ದೇವೆ. ಈ ಮಂದಿರವು ತಾವು ನೀಡುವ ದಾನದ ಗುರುಕಾಣಿಕೆಯ ಮೂಲಕ ನಿರ್ಮಾಣವಾಗುತ್ತಲಿದೆ. ಶ್ರದ್ಧಾ ಭಕ್ತಿಯಿಂದ ಈ ಮಹತ್ತರ ಕಾರ್ಯಕ್ಕೆ ಶಕ್ತಿಯಾಗಿ ನಿಲ್ಲುವಿರೆಂದು ಭಾವಿಸಿದ್ದೇವೆ.